ಮೆಜೆಂಡಿ, ಫ್ರಾಂಕಾಯ್ಸ್ 
 	1783-1855. ಫ್ರಾನ್ಸಿನ ಪ್ರಸಿದ್ಧ ಪ್ರಾಯೋಗಿಕ ಶರೀರಕ್ರಿಯಾವಿಜ್ಞಾನಿ ಹಾಗೂ ಪ್ರಾಯೋಗಿಕ ಔಷಧವಿಜ್ಞಾನದ ಜನಕ. ಬೋರ್ಡೊ ನಗರದಲ್ಲಿ 1783 ಅಕ್ಟೋಬರ್ 16ರಂದು ಜನನ. ಪ್ರಸಿದ್ಧ ಶಸ್ತ್ರವೈದ್ಯ ಅಲೆಕ್ಸಿನ್ ಬಾರ್ಕರ್ ಎಂಬವನ ನೇತೃತ್ವದಲ್ಲಿ ಶರೀರರಚನಾ ವಿಜ್ಞಾನವನ್ನು ಅಭ್ಯಸಿಸಿ 1803ರಲ್ಲಿ ಪ್ಯಾರಿಸ್ ವಿಶ್ವವಿದ್ಯಾಲಯದ ಎಂ.ಡಿ. ಪದವಿ ಗಳಿಸಿದ ಮತ್ತು ಆ ಕೂಡಲೇ ಶರೀರರಚನಾ ವಿಜ್ಞಾನದ ಅಧ್ಯಾಪಕನಾಗಿ ನೇಮಿತನಾದ. ವಮನವಾಗುವಾಗ ಜಠರದ ಪಾತ್ರ ಜಡ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿದ (1813). ವಮನಕಾರಕಗಳ ಕ್ರಿಯಾವಿಧಾನವನ್ನು ಅಧ್ಯಯನ ಮಾಡಿದ. ಈ ದಿಶೆಯಲ್ಲಿ ಸೇವಿಸಿದ ಔಷಧಗಳು ಕ್ರಿಯಾಶೀಲವಾಗುವ ಸ್ಥಳವನ್ನು ತಪಾಸಣೆ ಮಾಡಿದ ಮೊದಲಿಗ ಈ ವಿಜ್ಞಾನಿ. ಈ ವ್ಯಾಸಂಗಗಳಿಂದ ಸ್ಟ್ರಿಕ್‍ನಿನ್ ಮತ್ತು ಮಾರ್ಫಿನ್‍ಗಳನ್ನು ಹೇಗೆ ಮತ್ತು ಏಕೆ ಬಳಸಬೇಕೆಂದು ವಿಶದೀಕರಿಸಿದ. ಕೇಂದ್ರ ವಮನಕಾರಕವಾದ (ಸೆಂಟ್ರಲ್ ಎಮಿಟಿಕ್) ಎಮಿಟಿನ್ ಎಂಬ ಕ್ಷಾರವನ್ನು (ಆಲ್ಕಲಾಯ್ಡ್) ಪೆಲ್ಲೆಟಿಯರ್ ಎಂಬ ಇನ್ನೊಬ್ಬ ವಿಜ್ಞಾನಿಯೊಡನೆ ಶೋಧಿಸಿದ (1817). 1821ರಲ್ಲಿ ಇವನನ್ನು ಫ್ರಾನ್ಸಿನ ವಿಜ್ಞಾನ ಸಂಸ್ಥೆಯ ಸದಸ್ಯನಾಗಿ ಚುನಾಯಿಸಿದರು. ಮುಂದೆ 1837ರಲ್ಲಿ ಆ ಸಂಸ್ಥೆಯ ಅಧ್ಯಕ್ಷನೇ ಆದ. 1831ರಲ್ಲಿ ಫ್ರಾನ್ಸಿನ ಉನ್ನತ ವೈದ್ಯ ವಿದ್ಯಾಲಯದಲ್ಲಿ ಶರೀರಕ್ರಿಯಾ ವಿಜ್ಞಾನ ಹಾಗೂ ರೋಗವಿಜ್ಞಾನದ ಪ್ರಾಧ್ಯಾಪಕನನ್ನಾಗಿ ನೇಮಿಸಲಾಯಿತು. 1818ರಿಂದ 31ರ ತನಕ ಖಾಸಗಿಯಾಗಿ ಕೂಡ ಪ್ರಾಯೋಗಿಕ ಶರೀರ ಕ್ರಿಯಾ ವಿಜ್ಞಾನವನ್ನು ಬೋಧಿಸುತ್ತಿದ್ದ. ಜೀವಂತ ಪ್ರಾಣಿಗಳನ್ನು ಕೊಯ್ದು ಭರ್ಜರಿ ಪ್ರಯೋಗಗಳನ್ನು ಮಾಡುವುದರಲ್ಲಿ ಸಮರ್ಥನೆಂದು ಪ್ರಖ್ಯಾತಿ ಪಡೆದ. ಕಿರಿಮಸ್ತಿಷ್ಕ, ಹೃದಯ ಹಾಗೂ ಧಮನಿಗಳ ಅನೇಕ ಕ್ರಿಯೆಗಳನ್ನು ಪ್ರಾಯೋಗಿಕವಾಗಿ ವಿಶದೀಕರಿಸಿದ. ಮಿದುಳು ದ್ರವ ಮಿದುಳುಬಳ್ಳಿ ದ್ರವದೊಡನೆ ಏಕವಾಗಿರುವುದೆಂದೂ, ಮಿದುಳುಬಳ್ಳಿ ಮಿದುಳುಗಳು ಕೂಡುವ ಸ್ಥಳದಲ್ಲಿರುವ ರಂಧ್ರವೇ ಇದರ ಕಾರಣವೆಂದೂ ವಿವರಿಸಿದ. ಈ ರಂಧ್ರಕ್ಕೆ ಫೊರಾಮೆನ್ ಆಫ್ ಮೆಜೆಂಡಿ ಎಂದೇ ಹೆಸರು. ಮಿದುಳುಬಳ್ಳಿಯ ಎಡಬಲ ಎರಡು ಕಡೆಯೂ ಇರುವ ಮುಂಭಾಗದ ನರಮೂಲಗಳು ಕ್ರಿಯಾವಾಹಿಗಳೆಂದೂ ಹಿಂಭಾಗದ ನರಮೂಲಗಳು ಜ್ಞಾನವಾಹಿಗಳೆಂದೂ ಪ್ರತಿಪಾದಿಸಿದ. ಆದರೆ ಬೆಲ್ ಎಂಬ ಬ್ರಿಟಿಷ್ ವಿಜ್ಞಾನಿ ಇದೇ ಸಿದ್ಧಾಂತವನ್ನು 1811ರಲ್ಲಿ ಮಂಡಿಸಿದ್ದನಾದ್ದರಿಂದ ಇದನ್ನು ಬೆಲ್-ಮೆಜೆಂಡಿ ನಿಯಮ ಎಂದು ಕರೆಯಲಾಗಿದೆ. ತನ್ನ ಅನೇಕ ಪ್ರಯೋಗ ಫಲಿತಾಂಶಗಳನ್ನು ತಾನೇ ಸ್ಥಾಪಿಸಿದ ಜರ್ನಲ್ ಆಫ್ ಎಕ್ಸ್‍ಪೆರಿಮೆಂಟಲ್ ಫಿಸಿಯಾಲಜಿ ಎಂಬ ನಿಯತಕಾಲಿಕದಲ್ಲಿ ಈತ ಪ್ರಕಟಿಸಿದ.

	1855 ಅಕ್ಟೋಬರ್ 7ರಂದು ಪ್ಯಾರಿಸ್ಸಿನ ಹತ್ತಿರ ಸನ್ನಾಯ್ಸ್ ಎಂಬ ಒಂದು ಗ್ರಾಮದಲ್ಲಿ ನಿಧನನಾದ.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ